ವಿಂಧ್ಯವರ್ಮ
	ಪರಮಾರ ವಂಶದ ದೊರೆ. ಜಯವರ್ಮನ ಮಗ. ಇವನ ಇನ್ನೊಂದು ಹೆಸರು ವಿಜಯವರ್ಮ. ತಂದೆಯ ಅಳಿದುಳಿದ ರಾಜ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಆಗದಿದ್ದಾಗ ದಕ್ಷಿಣದಲ್ಲಿಯಾದರೂ ತನ್ನ ಭಾಗ್ಯೋದಯವಾಗಬಹುದು ಎಂದು ಆಲೋಚಿಸಿದ. ಇದೇ ಸಮಯದಲ್ಲಿ ಗುಜರಾತಿನ ಪರಿಸ್ಥಿತಿ ತೀರ ಕೆಟ್ಟಿತ್ತು. 1172ರಲ್ಲಿ ಚಾಳುಕ್ಯ ದೊರೆ ಕುಮಾರಪಾಲ ಮಡಿದ ಅನಂತರ ಗುಜರಾತಿನ ಚಾಳುಕ್ಯರ ಸಾಮ್ರಾಜ್ಯ ಕುಸಿಯತೊಡಗಿತು. ಆಗ ವಿಂಧ್ಯವರ್ಮನಿಗೆ ಸುವರ್ಣ ಸಂಧಿ ದೊರೆಯಿತು. ಈತ 2ನೆಯ ಮೂಲರಾಜನನ್ನು ಸೋಲಿಸಿ ಗೂರ್ಜರರ ರಾಜಧಾನಿ ಧಾರಾವನ್ನು ವಶಪಡಿಸಿಕೊಂಡ. ಆದರೂ ಸುತ್ತಮುತ್ತಲಿನಿಂದ ದಾಳಿಯ ಭಯ ತಪ್ಪಿರಲಿಲ್ಲ. ಹೊಯ್ಸಳ ಯಾದವ ರೊಡನೆ ಕದನ ಅನಿವಾರ್ಯವಾಯಿತು. ಚಾಳುಕ್ಯ ದೊರೆಗಳು ಪರಮಾರರ ತವರಾದ ಮಾಳ್ವವನ್ನು ಪುನಃ ಗೆಲ್ಲಲು ಹವಣಿಸಿದರೂ ಇವನ ಮುಂದೆ ಅವರ ಆಟ ನಡೆಯಲಿಲ್ಲ. ಮಾಳ್ವ ಊರ್ಜಿತ ಸ್ಥಿತಿಗೆ ಬಂದಿತು. ಈತ ಸು.1193ರ ವೇಳೆಗೆ ನಿಧನನಾದಂತೆ ತಿಳಿಯುತ್ತದೆ.				
				(ಆರ್.ಆರ್.ಎ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ